ಅಂತರಾಳ
ಮಳೆ ಮೋಡಗಳ ಅಬ್ಬರವೆಲ್ಲ ಅಡಗಿ ಆಕಾಶ ಈಗ ತಿಳಿಯಾಗಿದೆ. ಶರದೃತುವಿನ ಈ ಸಮಯದಲ್ಲಿ ದಸರಾ ದೀಪಾವಳಿ ಹಬ್ಬಗಳಲ್ಲಿ ಮುಳುಗೇಳುವ ಜನರಿಗೆ ಇದು ಸಂಭ್ರಮಿಸುವ ಸಮಯ. ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳಿಗೆ ಮತ್ತು ಮಹಿಳೆ ಯರಿಗೆ ಹಬ್ಬದ ಸಂಭ್ರಮವನ್ನು ಮತ್ತು ಕಳೆಯನ್ನು ಹೆಚ್ಚಿಸಲು ಸಿದ್ಧತೆಗಳನ್ನು ಮಾಡಿಕೊಳ್ಳುವ ಸಮಯ. ಹಬ್ಬಕ್ಕೆಂದು ಸೀರೆ, ಉಡುಪುಗಳ ಮತ್ತು ಚಿನ್ನಾಭರಣಗಳ ಖರೀದಿಗಾಗಿ ಬರುವ ಮಹಿಳೆಯರಿಂದ ಅಂಗಡಿಗಳು ತುಂಬಿವೆ. ಅರಳಿದ ಹೂಗಳಿಗೆ ದುಂಬಿ ಗಳು ಮುತ್ತುವಂತೆ ಹೊಸವಿನ್ಯಾಸದ ಆಭರಣಗಳತ್ತ ಮಹಿಳೆಯರ ದೃಷ್ಟಿ ಸರಿಯುತ್ತಿದೆ. ಉಟ್ಟು ತೊಟ್ಟು ಮಹಿಳೆಯರು ಸಂಭ್ರ ಮಿಸುವುದನ್ನು ನೋಡುವುದೇ ಚಂದ ಎಂಬುದು ರಸಿಕರ ಅನಿಸಿಕೆಯಾದರೆ ಸರ್ಕಾರದ ಉಚಿತಭಾಗ್ಯಗಳ ಅವಕಾಶಗಳನ್ನು ಮಹಿಳೆಯರು ಧಾರಾಳವಾಗಿ ಬಳಸಿಕೊಂಡು ಮನೆಯನ್ನು ಸೇರದೇ ತಿರುಗುತ್ತಿದ್ದಾರೆ ಎಂಬುದು ಕೆಲವು ಪುರುಷರ ಮತ್ಸರದ ನುಡಿಗಳಾಗಿವೆ. ವಿಷಯ ಏನೇ ಇರಲಿ, ಮಹಿಳೆಯರಿಂದಲೇ ಹಬ್ಬಗಳು ಕಳೆಗಟ್ಟುತ್ತವೆ ಎಂಬುದಂತೂ ಸತ್ಯ. ಹೆಣ್ಣಿಲ್ಲದ ಮನೆ ಮನೆಯೇ ಅಲ್ಲ ಎಂದು ನಂಬಿದ್ದ ಹಿರಿಯರು ವಂಶದಲ್ಲಿ ಹೆಣ್ಣುಮಗು ಜನಿಸಿದರೆ ಮನೆಗೆ ಲಕ್ಷ್ಮಿ ಬಂದಂತೆ ಎಂದು ಭಾವಿಸುತ್ತಿದ್ದರು. ಹೆಣ್ಣು ಎರಡು ಕುಟುಂಬಗಳನ್ನು ಬೆಸೆಯುವವಳು ಎನ್ನುವ ಅಗ್ಗಳಿಕೆಗೆ ಪಾತ್ರವಾಗಿ ಹುಟ್ಟಿದ ಮತ್ತು ಸೇರಿದ ಎರಡು ಕುಟುಂಬದವರಿಂದಲೂ ರಕ್ಷಣೆಯನ್ನು ಪಡೆಯುವವಳಾಗಿದ್ದಳು.

ವಿವಾಹದ ನಂತರವೂ ಅವಳ ಸೋದರರು ಅವಳ ನೆರವಿಗೆ ಧಾವಿಸುತ್ತಿದ್ದರು. ಹೀಗೆ ಮಹಿಳೆ ಜೀವನಪೂರ್ತಿ ರಕ್ಷಣೆಯ ವ್ಯವಸ್ಥೆಯೊಳಗೆ ಇರುವಂತಹ ಸ್ಥಿತಿಯಿದ್ದ ಕಾಲ ಯಾವಾಗ ಬದಲಾಯಿತೋ, ಮಹಿಳೆಯ ಮನೋಭಾವವೂ ಬದಲಾಯಿತು ಮತ್ತು ಕುಟುಂಬದ ಗಾತ್ರವೂ ಕುಗ್ಗತೊಡಗಿತು. ತುಂಬಿದ ಕುಟುಂಬವನ್ನು ಇಂದು ನೋಡಲೂ ಸಾಧ್ಯವಿಲ್ಲ. ಆದರೆ ಅದರ ಪರಿಣಾಮ ಮಹಿಳೆಯರ ಮೇಲಾಗುತ್ತಿದೆ. ಇಂದು ಪುಟ್ಟ ಹೆಣ್ಣುಮಗುವೊಂದು ಶಾಲೆಗೆ ಹೊರಟಳೆಂದರೆ ಅವಳು ಮನೆಗೆ ಬರುವವರೆಗೆ ತಾಯಿಯ ಜೀವ ಭಯದಿಂದ ತುಡಿಯುತ್ತದೆ. ಮಗಳು ಸಂಜೆಗೆ ಸುರಕ್ಷಿತವಾಗಿ ಮನೆಗೆ ಬಂದಳೆಂದರೆ ಅವಳಿಗೆ ಅದೇ ದೊಡ್ಡ ಸಮಾಧಾನದ ವಿಷಯವೆನಿಸುತ್ತದೆ. ಹೆಣ್ಣುಮಕ್ಕಳ ಅಪಹರಣ, ಸಾಮೂಹಿಕ ಅತ್ಯಾಚಾರದಂತಹ ಘಟನೆಗಳು, ಅನಾರೋಗ್ಯ, ಅಪಘಾತಗಳು ಹೀಗೆ ಹಲವು ವಿಷಯಗಳು ಬಾಲ್ಯದಲ್ಲೇ ಜೀವನದ ಬಗೆಗೆ ಭಯವನ್ನು ಸೃಷ್ಟಿಸಿಬಿಡುತ್ತವೆ. ಕುಟುಂಬದಲ್ಲಿ ಒಂದೇ ಮಗು, ಹೆತ್ತವರು ಅಥವಾ ಪೋಷಕರು ಉದ್ಯೋಗನಿರತರಾಗಿರುವುದು, ಮಗುವಿನ ಕಷ್ಟಸುಖಗಳನ್ನು ವಿಚಾರಿಸಲು ಮನೆಯಲ್ಲಿ ಇತರ ಸದಸ್ಯರಿಲ್ಲದಿರುವುದು ಇವೆಲ್ಲವೂ ಮಗುವಿನ ಪಾಲಿಗೆ ಆಡಲಾರದ ಅನುಭವಿಸಲಾರದ ವಿಷಯವಾಗಿ ಕಾಡುತ್ತವೆ.
ಕೆಲವು ದಶಕಗಳ ಹಿಂದೆ ಪರಿಸ್ಥಿತಿ ಬೇರೆಯೇ ಇತ್ತು. ಮನೆಗೆ ಬರುತ್ತಿದ್ದ ಬಂಧುಗಳ ಪ್ರೀತಿ ವಿಶ್ವಾಸಗಳು, ಅವರು ಕೊಡುತ್ತಿದ್ದ ತಿನಿಸುಗಳು, ಅವರು ಆಡುತ್ತಿದ್ದ ಮಾತುಗಳು ಎಲ್ಲವೂ ಮಗುವಿನ ಮನದಲ್ಲಿ ಆಪ್ತತೆಯನ್ನು ಸೃಷ್ಟಿಸುತ್ತಿದ್ದವು. ಶಾಲೆಯಲ್ಲೂ ಶಿಕ್ಷಕರು ಪ್ರೀತಿಯಿಂದ ಕಲಿಸುತ್ತಿದ್ದ ಹಾಡುಗಳು, ಪದ್ಯಗಳು, ಶಿಶುಗೀತೆಗಳು ಎಲ್ಲವೂ ಆಟದಂತೆಯೇ ಭಾಸವಾಗಿ ಕಲಿಕೆಯೂ ಹಿತವೆನಿಸುವಂತಾಗಿತ್ತು. ಮಕ್ಕಳು ತಾವು ಕಲಿತ ಪದ್ಯಗಳನ್ನು ಮನೆಯಲ್ಲಿ ಹಿರಿಯರ ಎದುರು ಹೇಳಿ ಅವರಿಂದ ಮೆಚ್ಚುಗೆಯ ಮಾತುಗಳನ್ನು ಕೇಳಿ ಸಂಭ್ರಮಿಸುತ್ತಿದ್ದರು. ಬಣ್ಣಬಣ್ಣದ ಉಡುಗೆಯನ್ನು ಧರಿಸಿ ನಡೆಯುತ್ತ ಶಾಲೆಗೆ ಹೋಗುವ ಮಕ್ಕಳನ್ನು ನೋಡುತ್ತಿದ್ದವರಿಗೆ ಅವರ ಮುಗ್ಧಭಾವ ಸಂತೋಷವನ್ನು ನೀಡುತ್ತಿತ್ತು. ಇಂದು ಪರಿಸ್ಥಿತಿ ಬದಲಾಗಿದೆ. ಎಲ್ಕೆಜಿಯಿಂದಲೇ ನಾವು ಅವರ ಮನದ ಮೇಲೆ ಕಲಿಕೆಯ ಒತ್ತಡವನ್ನು ಹಾಕಿ ಅವರ ಬಾಲ್ಯದ ಮುಗ್ಧತೆಯನ್ನೇ ಕಳೆದಿದ್ದೇವೆ.
ಪಠ್ಯದಲ್ಲಿನ ವಿಷಯಗಳ ಜೊತೆಗೆ ಹಾಡುವುದು, ನೃತ್ಯ, ಅಭಿನಯ ಹೀಗೆ ಹಲವು ವಿಷಯಗಳಲ್ಲಿ ಮಕ್ಕಳು ಪರಿಣತರಾಗಬೇಕು ಎಂದು ಬಯಸುವ ಹೆತ್ತವರು ಅವರ ಆಸೆಗಳನ್ನು ಮಕ್ಕಳ ಮನದ ಮೇಲೆ ಹೇರಿ ಮತ್ತಷ್ಟು ಭಾರವಾಗಿಸುತ್ತಾರೆ. ದೃಶ್ಯ ಮಾಧ್ಯ ಮಗಳ ಪ್ರಭಾವಕ್ಕೆ ಒಳಗಾದ ಮಕ್ಕಳು ತಾವೂ ಅವರಂತಾಗಿ ತೆರೆಯ ಮೇಲೆ ಮಿಂಚಬೇಕೆಂದು ಬಯಸಿ ತಮ್ಮ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಬಗೆಬಗೆಯ ಕಸರತ್ತುಗಳನ್ನು ನಡೆಸುತ್ತಾರೆ. ಓದಿಗಿಂತ ಅವರ ಆಸಕ್ತಿ ಫ್ಯಾಷನ್, ಹುಡುಗರನ್ನು ಆಕರ್ಷಿಸುವುದು ಹೀಗೆ ಹಲವು ದಿಕ್ಕುಗಳಲ್ಲಿ ಹಂಚಿಹೋಗುತ್ತಿದೆ. ಕೊರೆಯುವ ಛಳಿಯಲ್ಲೂ ಕನಿಷ್ಠ ಪ್ರಮಾಣದ ಉಡುಗೆಯನ್ನು ಧರಿಸಿ ಅಥವಾ ಹರಿದ ಜೀನ್ಸ್ ಪ್ಯಾಂಟ್ ಧರಿಸಿ ಓಡಾಡುವ ಹೆಣ್ಣುಮಕ್ಕಳು ಸಮಾಜಕ್ಕೆ ಏನು ಸಂದೇಶ ನೀಡ ಬಲ್ಲರು? ಮಕ್ಕಳಿಗೆ ಶಿಸ್ತು, ಸಂಪ್ರದಾಯಗಳನ್ನು ಕಲಿಸಬೇಕಾದ ಹಿರಿಯರು ಅಥವಾ ಶಿಕ್ಷಕರು ಎಲ್ಲವನ್ನು ನೋಡಿಯೂ ನೋಡದಂತಿದ್ದಾರೆ. ಅಂಕಗಳನ್ನು ಗಳಿಸುವುದೇ ವಿದ್ಯೆಯ ಗುರಿ ಎಂದು ಭಾವಿಸಿದ ತರುಣಿಯರು ಸ್ವೇಚ್ಛೆಯನ್ನೇ ಸ್ವಾತಂತ್ರ್ಯವೆಂದು ಭಾವಿಸಿದ್ದಾರೆ.
ತಮ್ಮ ಆಲೋಚನೆಗಳೇ ಸರಿ ಎಂದು ಭಾವಿಸಿರುವ ಯುವಜನರು ಇತರ ಶ್ರಮಿಕವರ್ಗದವರನ್ನು ದೂರವಿರಿಸಿ ಸಮಾಜದಿಂದ ದೂರವಾಗಿ ಬದುಕನ್ನು ನಡೆಸುವುದನ್ನು ನೋಡುವಾಗ ಇವರ ಈ ಭ್ರಮೆಯನ್ನು ದೂರಮಾಡುವುದು ಹೇಗೆ ಎನ್ನಿಸದಿರದು. ಸಾಮರಸ್ಯದ ಬಾಳ್ವೆಯಿಂದ ವಂಚಿತರಾದ ಯುವತಿಯರು ಅಸಫಲತೆಯಿಂದಾಗಿ ಆತ್ಮಹತ್ಯೆಗೂ ಮುಂದಾಗುತ್ತಿದ್ದಾರೆ. ಇವೆಲ್ಲಕ್ಕೂ ಕೊನೆಯುಂಟೇ?

